ಕ್ಯಾರಿಬ್	

ಕ್ಯಾರಿಬೀಯನ್ ಸಮುದ್ರದ ನೆರೆಯ ಭೂಪ್ರದೇಶಗಳು ಸ್ಪೇನಿನ ಆಕ್ರಮಣಕ್ಕೊಳಗಾದ ಕಾಲದಲ್ಲಿ ಲೆಸರ್ ಆಂಟಲಿಸ್ ದ್ವೀಪಗಳಲ್ಲೂ ಇವುಗಳ ಬಳಿಯ ದಕ್ಷಿಣ ಅಮೆರಿಕನ್ ಭೂಭಾಗದಲ್ಲೂ ವಾಸಿಸುತ್ತಿದ್ದ ಯುದ್ಧೋತ್ಸಾಹಿ ನರಭಕ್ಷಕ ಇಂಡಿಯನರು. ಸೆರೆಯಾದ ಶತ್ರುಗಳನ್ನು ಭಕ್ಷಿಸುವುದು ಇವರ ಪದ್ಧತಿಯಾಗಿತ್ತು. ಈ ಜನಕ್ಕೆ ಕ್ಯಾನಿಬ ಎಂಬುದೂ ಒಂದು ಹೆಸರಾಗಿತ್ತು. ನರಭಕ್ಷಕ ಎಂಬುದಕ್ಕೆ ಕ್ಯಾನಿಬಾಲ್ ಎಂಬ ಇಂಗ್ಲಿಷ್ ಪದ ಬಂದದ್ದು ಈ ಹೆಸರಿನಿಂದ-ಎಂದು ಹೇಳಲಾಗಿದೆ. ಕ್ಯಾರಿಬ್ ಜನ ವಾಸಿಸುತ್ತಿದ್ದ ಪ್ರದೇಶದ ನೆರೆಯ ಸಮುದ್ರಕ್ಕೆ ಕ್ಯಾರಬೀಯನ್ ಸಮುದ್ರವೆಂದು ಹೆಸರಾಯಿತು.

ಮೂಲತಃ ಆಂಟೆಲಿಯನ್ ಕ್ಯಾರಿಬ್ ಜನ ದಕ್ಷಿಣ ಅಮೆರಿಕದ ಉತ್ತರ ಭಾಗದಲ್ಲಿ ವಾಸಿಸುತ್ತಿದ್ದರು. ಸ್ಪೇನಿನವರು ಅಲ್ಲಿಗೆ ಆಗಮಿಸುವುದಕ್ಕೆ ಸ್ವಲ್ಪ ಮುಂಚೆ ಇವರು ಲೆಸರ್ ಆಂಟಿಲಿಸನ್ನು ಅರವಾಕನ್ ಪಂಗಡಗಳಿಂದ ಕಿತ್ತುಕೊಂಡಿದ್ದರು. ದೊಡ್ಡ ತೋಡುದೋಣಿಗಳಲ್ಲಿ ಬಹು ದೂರ ಸಾಗಿ ಜನರನ್ನು ಸೆರೆಹಿಡಿದು ಅವರ ಪೈಕಿ ಗಂಡಸರನ್ನು ಹಿಂಸಿಸಿ ಕೊಂದು, ವಿಜಯ ಸಮಾರಂಭದ ಕಾಲದಲ್ಲಿ ಅವರ ಮಾಂಸವನ್ನು ಭಕ್ಷಿಸುತ್ತಿದ್ದರು. ಸೆರೆಯಾಳುಗಳ ಹೆಂಗಸರನ್ನು ತಮ್ಮ ಹೆಂಡಿರನ್ನಾಗಿ ಮಾಡಿಕೊಳ್ಳುತ್ತಿದ್ದರು.

ಕ್ಯಾರಿಬಾನ್ ಭಾಷೆಯನ್ನಾಡುವ ಜನ ಗಿಯಾನದಲ್ಲೂ ಆಮೆಜಾóನ್ ನದಿಯ ದಕ್ಷಿಣ ಭಾಗದಲ್ಲೂ ವಾಸಿಸುತ್ತಿದ್ದರು. ಕೆಲವು ಪಂಗಡಗಳ ಜನ ಕಲಹಪ್ರಿಯರೂ ನರಮಾಂಸ ಭಕ್ಷಕರೂ ಆಗಿದ್ದರು. ಆದರೆ ಒಟ್ಟಿನಲ್ಲಿ ಅವರಲ್ಲಿ ಬಹುಮಂದಿ ಹೆಚ್ಚು ಸೌಮ್ಯವಾದವರು. ಅವರು ದ್ವೀಪವಾಸಿ ಕ್ಯಾರಿಬ್ ಜನಗಳಷ್ಟು ಆಕ್ರಮಣಶೀಲರಾಗಿರಲಿಲ್ಲ. ಕೃಷಿನಿರತರು ಅಲ್ಲಲ್ಲಿ ವಾಸಿಸುತ್ತಿದ್ದರು. ಬೇಟೆಯಾಡಲು ದೇಶೀಯ ಬಂದೂಕು ಅಥವಾ ಬಿಲ್ಲುಬಾಣಗಳನ್ನು ಉಪಯೋಗಿಸುತ್ತಿದ್ದರು. ಉಷ್ಣವಲಯದ ಅರಣ್ಯವಾಸಿಗಳಂತೆ ಇವರೂ ಬಹುತೇಕ ನಗ್ನರಾಗಿಯೇ ಇದ್ದರು. ಆದರೆ ತಮ್ಮ ಶರೀರಗಳನ್ನು ಬಣ್ಣ ಬಣ್ಣದ ಚಿತ್ರಗಳಿಂದಲೂ ಆಭರಣಗಳಿಂದಲೂ ಅಲಂಕರಿಸಿಕೊಳ್ಳುತ್ತಿದ್ದರು. ಪ್ರತಿಯೊಂದು ಹಳ್ಳಿಯಲ್ಲೂ ವಿಸ್ತøತ ಕುಟುಂಬಗಳ ಒಂದು ಗುಂಪು ಇದ್ದು, ಅದಕ್ಕೊಬ್ಬ ಮುಖಂಡನಿರುತ್ತಿದ್ದ. ಅವರ ಧಾರ್ಮಿಕ ಆಚರಣೆಗಳು ಸರಳವಾಗಿರುತ್ತಿದ್ದುವು. ದೊಡ್ಡ ಹಾಗೂ ಸಂಕೀರ್ಣವಾದ ಸಮಾರಂಭಗಳು ಬಹಳ ಕಡಿಮೆ. ಅವರಿಗೆ ಭೂತಗಳಲ್ಲಿ ನಂಬಿಕೆಯಿತ್ತು. ಕಾಯಿಲೆಗಳಿಗೆ ಭೂತಗಳೇ ಕಾರಣವೆಂದು ಅವರು ನಂಬಿದ್ದರು. ಇವುಗಳಲ್ಲಿ ಕೆಲವು ಭೂತಗಳ ಮೇಲೆ ತಮಗೆ ಹತೋಟಿಯಿದೆಯೆಂದು ಧಾರ್ಮಿಕ ನಾಯಕರು ಹೇಳಿಕೊಳ್ಳುತ್ತಿದ್ದರು. ಅವರಿಗೆ ರೋಗವನ್ನು ಗುಣಪಡಿಸಲು ಶಕ್ತಿಯಿದೆಯೆಂಬ ನಂಬಿಕೆಯಿತ್ತು.

ಇತರ ಕ್ಯಾರಿಬೀಯನ್ ಪಂಗಡಗಳವರು ವೆನಿಜಿó್ವೀಲ ಮತ್ತು ಕೊಲಂಬಿಯಗಳ ನಡುವಣ ಗಡಿಯ ಉದ್ದಕ್ಕೂ ಆಂಡೀ ಪರ್ವತಗಳ ಇಳಿಜಾರುಗಳ ಅರಣ್ಯಗಳಲ್ಲಿ, ವಾಸಿಸುತ್ತಿದ್ದರು. ಈ ಪಂಗಡಗಳ ಜನರ ಬಗ್ಗೆ ಹೆಚ್ಚು ವಿಷಯ ತಿಳಿದಿಲ್ಲ. ಆದರೆ ಇವರಿಗೂ ಗಿಯಾನ ಕ್ಯಾರಿಬ್ ಜನಕ್ಕೂ ಅಷ್ಟೊಂದು ವ್ಯತ್ಯಾಸವಿರಲಿಲ್ಲ. ಮಧ್ಯ ಬ್ರೆಜಿóಲ್‍ನಲ್ಲಿರುವ ಕ್ಸಿಂಗು ನದಿಯ ಉಗಮ ಪ್ರದೇಶದಲ್ಲಿ ಕುಯಿಕುರು, ಬಕೇರಿ ಮತ್ತು ಇನ್ನೂ ಹಲವು ಪಂಗಡಗಳ ಜನರಿದ್ದರು. ಇವರೂ ಕ್ಯಾರಿಬನ್ ಭಾಷೆಯನ್ನಾಡುವವರಾಗಿದ್ದರು. ಇತರ ಭಾಷೆಗಳನ್ನಾಡುವವರ ಜೊತೆಯಲ್ಲೇ ಇವರೂ ವಾಸಿಸುತ್ತಿದ್ದರು. ಬ್ರಿಟಿಷರು ಲೆಸರ್ ಆಂಟಿಲಿಸ್‍ನಲ್ಲಿ ಇದ್ದ ಕ್ಯಾರಿಬರನ್ನು ಡಾಮಿನಿಕಕ್ಕೆ ರವಾನಿಸಿದರು. ಈಗಲೂ ಅವರು ಅಲ್ಲಿದ್ದಾರೆ. ಆದರೆ ಅವರು ತಮ್ಮ ಪೂರ್ವದ ಸಂಸ್ಕøತಿ ಮತ್ತು ಭಾಷೆಗಳನ್ನು ಸಂಪೂರ್ಣವಾಗಿ ಉಳಿಸಿಕೊಂಡಿಲ್ಲ. 											 (ಎಸ್.ಎಚ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ